ಕಾಡ್ ಮೀನು

 ವಿಶ್ವದ ಮೀನುಗಾರಿಕೆಯಲ್ಲಿ ಅತ್ಯಂತ ಹೆಸರಾಂತ ಮೀನು. ಗೇಡಸ್ ಎಂಬ ವ್ಶೆಜ್ಞಾನಿಕ ಹೆಸರಿನ ಜಾತಿಗೂ ಹ್ಯಾಡಕ್, ಹೇಕ್ ಮತ್ತು ಪೋಲಕ್ ಮೀನುಗಳನ್ನೊಳಗೊಂಡ ಗ್ಯಾಡಿಡೆ ಕುಟುಂಬಕ್ಕೆ ಸೇರಿದೆ. ಗೇಡಸ್ ಜಾತಿಯಲ್ಲಿ ಸುಮಾರು 30 ಪ್ರಭೇದಗಳಿವೆ. ಇವುಗಳಲ್ಲಿ ಗೇಡಸ್ ಮಾರ್ಹುವ (ಅಥವಾ ಗೇಡಸ್ ಕೆಲ್ಲೇರಿಯಸ್) ಮತ್ತು ಗೇಡಸ್ ಮೈಕ್ರೊಸಿಫ್ಯಾಲಸ್ ಮುಖ್ಯವಾದವು.

 ಇವೆಲ್ಲ ಆಹಾರಯೋಗ್ಯವಾದ ಮೀನುಗಳು. ಅಲ್ಲದೆ ಇವುಗಳ ಯಕೃತ್ತಿನಿಂದ ಎಣ್ಣೆಯನ್ನೂ ತೆಗೆಯುತ್ತಾರೆ. ಈ ಎಣ್ಣೆಯಲ್ಲಿ ಎ-ವಿಟಮಿನ್ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿದೆ. ಕಾಡ್ ಮೀನುಗಳು ಸಮಶೀತೋಷ್ಣ ಮತ್ತು ಶೀತಸಮುದ್ರಗಳ ನಿವಾಸಿಗಳು. ಸಮುದ್ರದ ಅಂಚು ಪ್ರದೇಶಗಳಲ್ಲಿ ನೀರಿನ ಆಳ 150 ಫ್ಯಾದಮ್‍ಗಿಂತ ಕಡಿಮೆ ಇರುವ ಸ್ಥಳಗಳಲ್ಲಿ ವಾಸಿಸುತ್ತವೆ.

 ಗೇಡಸ್ ಮಾರ್ಹುವದಲ್ಲಿ (ಅಟ್ಲಾಂಟಿಕ್ ಕಾಡ್ ಮೀನು) ಮೂರು ಬೆನ್ನಿನ ರೆಕ್ಕೆಗಳೂ ಎರಡು ಗುದದ ರೆಕ್ಕೆಗಳೂ ಇವೆ. ಮೇಲುದವಡೆ ಕೆಳದವಡೆಗಿಂತಲೂ ಮುಂದಕ್ಕೆ ಚಾಚಿದೆ. ಬಾಯ ಕೆಳಗೆ ಮೀಸೆಯಂಥ ಎಳೆಗಳಿವೆ. ಇದರ ಬಣ್ಣ ಬೂದು ಮಿಶ್ರಿತವಾದ ಹಸಿರಿನಿಂದ ಇಟ್ಟಿಗೆ ಕೆಂಪಿನವರೆಗೆ ವ್ಯತ್ಯಾಸವಾಗುತ್ತದೆ. ಈ ಮೀನು ಉತ್ತರ ಯೂರೋಪಿನ ಸಮುದ್ರಗಳಲ್ಲಿಯೂ ಉತ್ತರ ಅಮೆರಿಕ ಪೂರ್ವ ಕರಾವಳಿಯ ಉತ್ತರಭಾಗದಲ್ಲಿಯೂ ಹೇರಳವಾಗಿ ದೊರೆಯುತ್ತದೆ. ಇವು ಸುಮಾರು ಆರು ಅಡಿಗಳವರೆಗೆ ಬೆಳೆಯುತ್ತದಾದರೂ ಹಿಡಿವಳಿಯಲ್ಲಿ ಸಣ್ಣ ಮೀನುಗಳೇ ಹೆಚ್ಚಾಗಿರುತ್ತವೆ.

 ಅಟ್ಲಾಂಟಿಕ್ ಕಾಡ್ ಮೀನು ನವೆಂಬರಿನಿಂದ ಆಗಸ್ಟ್ ತಿಂಗಳವರೆಗೆ (ಹೆಚ್ಚಾಗಿ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳ ವರೆಗೆ) ಮೊಟ್ಟೆಯಿಡುತ್ತದೆ. ಬೇಸಗೆಯಲ್ಲೆ ಮೊಟ್ಟೆಯಿಡುವುದು ಹೆಚ್ಚು. ಇದದೊಂದು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಯಿಡುವ ಮೀಣು. ಸುಮಾರು 75 ಪೌಂಡ್ ತೂಕದ ಹೆಣ್ಣು ಮೀನು 90 ಲಕ್ಷ ಮೊಟ್ಟೆಗಳನ್ನಿಡಬಹುದು. ಮೊಟ್ಟೆಗಳು ನೀರಿನ ಉಷ್ಣಾಂಶವನ್ನು ಅವಲಂಬಿಸಿ 10 ರಿಂದ 50 ದಿನಗಳಲ್ಲಿ ಒಡೆದು ಮರಿಗಳಾಗುತ್ತದೆ. ಬೇರೆ ಮೀನುಗಳು ಮತ್ತು ಇತರ ಸಣ್ಣ ಪ್ರಾಣಿಗಳು ಕಾಡ್‍ಮೀನಿನ ಆಹಾರ. ಕಾಡ್‍ಮೀನು ಬೇಸಗೆಯಲ್ಲಿ ಉತ್ತರಕ್ಕೂ ಚಳಿಗಾಲದಲ್ಲಿ ದಕ್ಷಿಣಕ್ಕೂ ವಲಸೆ ಹೋಗುವುದುಂಟು. 

 ಉತ್ತರ ಯೂರೋಪಿನ ಮತ್ತು ಅಮೆರಿಕದ ಎಲ್ಲ ಕಡಲಂಚಿನ ರಾಷ್ಟ್ರಗಳಲ್ಲಿಯೂ ಕಾಡ್ ಮೀನುಗಾರಿಕೆ ಮುಖ್ಯವಾದ ಉದ್ಯಮ. ಟ್ರಾಲ್ ಬಲೆ ಮತ್ತು ಗಾಳಗಳೇ ಈ ಮೀನುಬೇಟೆಗೆ ಮುಖ್ಯ ಸಲಕರಣೆಗಳು. ಕಾಡ್ ಮೀನಿನ ಮಾಂಸ ಬಲುರುಚಿಯೆಂದು ಹೆಸರಾಗಿದೆ. ಹಿಡಿವಳಿಯ ಹೆಚ್ಚು ಭಾಗವನ್ನು ಒಣಗಿಸಿ ಅಥವಾ ಉಪ್ಪು ಹಾಕಿ ಹದಮಾಡಲಾಗುತ್ತದೆ. ಬ್ರಿಟನ್, ರಷ್ಯ, ಕೆನಡ, ನಾರ್ವೆ, ಸ್ಪೇನ್ ಮತ್ತು ಪಶ್ಚಿಮ ಜರ್ಮನಿಗಳಲ್ಲಿ ವರ್ಷಕ್ಕೆ 2 ಲಕ್ಷ ಟನ್‍ಗಿಂತಲೂ ಹೆಚ್ಚು ಕಾಡ್ ಮೀನನ್ನು ಹಿಡಿಯಲಾಗುತ್ತದೆ. 

 ಗೇಡಸ್ ಮೈಕ್ರೊಸಿಫ್ಯಾಲಸ್ (ಪೆಸಿಫಿಕ್ ಸಾಗರದ ಕಾಡ್ ಮೀನು) ಎಂಬ ಪ್ರಭೇದ ಪೆಸಿಫಿಕ್ ಸಾಗರದ ಪ್ರಮುಖವಾದ ಮೀನು. ಇದನ್ನು ಗೇ. ಮಾರ್ಹುವ ಪ್ರಭೇದದ ಒಂದು ಬಗೆಯೆಂದೂ ಪರಿಗಣಿಸಲಾಗಿದೆ. ಕೆನಡ, ಅಮೆರಿಕದ ಸಂಯುಕ್ತ ಸಂಸ್ಥಾನ, ಜಪಾನ್, ಕೊರಿಯ ಮತ್ತು ರಷ್ಯ ದೇಶಗಳಲ್ಲಿ ಇದರ ಮೀನುಗಾರಿಕೆ ಒಂದು ಪ್ರಮುಖ ಉದ್ಯಮವೆನಿಸಿದೆ.  

 

(ಸಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ